ಪರಿಚಯ ಮತ್ತು ನಡೆದು ಬಂದ ದಾರಿ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿರುವ ವಿವಿಧ ಅಕಾಡೆಮಿಗಳಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯೂ ಒಂದು. ನಮ್ಮ ರಾಜ್ಯದ ಸಂಗೀತ-ನೃತ್ಯ ಅಕಾಡೆಮಿ, ರಾಜ್ಯಗಳ ಪುನರ್ವಿಂಗಡನೆಯ ಸಮಯದಲ್ಲಿ ಸ್ಥಾಪಿತವಾಯಿತು. ಆಗ ಅದರ ನಾಮಧೇಯ ಮೈಸೂರು ಸಂಗೀತ-ನಾಟಕ ಅಕಾಡೆಮಿ ಎಂದಾಗಿತ್ತು.

ಆಳವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ, ಜನಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಡೆಸಿಕೊಂಡು ಬರುತ್ತಿದೆ. 1978 ರಲ್ಲಿ ಸ್ವಾಯತ್ತತೆ ಪಡೆದ ನಂತರ, ಅಕಾಡೆಮಿಯು ಸಾಂಸ್ಕೃತಿಕ ಪರಿಪೂರ್ಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮಹತ್ತರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮರ್ಪಕವಾಗಿ ನಡೆಸುತ್ತಾ ಬಂದಿದೆ.ವಿವಿಧ ಸಂಗೀತ ನೃತ್ಯ ಕಲಾ ಪ್ರಕಾರಗಳನ್ನು ಪೋಷಿಸಿ, ಬೆಳೆಸಿ ನಾಡಿನ ನೆಲದಲ್ಲಿ ಕಂಪು ಸೂಸು ಶ್ಲಾಘನೀಯ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ.

ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಕಾಡೆಮಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಕಲಾ ಪ್ರಕಾರಗಳನ್ನು ದಾಖಲೀಕರಿಸುವ,ಮುಂದಿನ ಪೀಳಿಗೆಗೆ ಅದನ್ನು ಕಾಪಿಡುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ.

ಅಕಾಡೆಮಿಯ ಈ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ಮೂರು ವರ್ಷಗಳ ಅವಧಿಗೆ ಅರ್ಹ ವ್ಯಕ್ತಿಗಳನ್ನು ಅಧ್ಯಕ್ಷರು ಮತ್ತು ಸದಸ್ಯರುಗಳನ್ನಾಗಿ ನೇಮಕ ಮಾಡಲಾಗುತ್ತದೆ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದವರು ರಾಜ್ಯದ ಘನತೆವೆತ್ತ ರಾಜಪ್ರಮುಖರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್. ನಾಡಿನ ಶ್ರೇಷ್ಠ ಕಲಾವಿದರಾಗಿದ್ದ ಗುಬ್ಬಿ ವೀರಣ್ಣ, ಟಿ. ಚೌಡಯ್ಯ, ಅ.ನ. ಕೃಷ್ಣರಾವ್, ಬಿ. ಶಿವಮೂರ್ತಿ ಶಾಸ್ತ್ರಿ ಮುಂತಾದವರೆಲ್ಲಾ ಅದರ ಸದಸ್ಯರು. ಅದರ ಚಟುವಟಿಕೆಗಳಲ್ಲಿ ಅಂತರರಾಜ್ಯ ಸಂಗೀತ-ನೃತ್ಯ ಕಾರ್ಯಕ್ರಮಗಳ ವಿನಿಮಯ, ಸ್ಥಳೀಯ ಕಲಾ ತಂಡಗಳ ಪ್ರದರ್ಶನ ಮುಖ್ಯವಾದವು.

ನಂತರದ ದಿನಗಳಲ್ಲಿ, ಈ ಅಕಾಡೆಮಿಯನ್ನು ವಿದ್ಯಾ ಇಲಾಖೆಯ ಆಡಳಿತಕ್ಕೆ ಒಳಪಡಿಸಲಾಯಿತು. ಆಯಾ ಸಮಯದ ವಿದ್ಯಾ ಮಂತ್ರಿಗಳೆ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಶ್ರೀಯುತರಾದ ಕೆ.ವಿ. ಶಂಕರಗೌಡ, ಎಸ್.ಆರ್. ಕಂಠಿ, ಎ.ಆರ್. ಬದರಿನಾರಾಯಣ್, ಅಣ್ಣಾರಾವ್ ಗಣಮುಖಿಯವವರನ್ನು ಇಲ್ಲಿ ಹೆಸರಿಸಬಹುದು.

ಆ ಅವಧಿಯಲ್ಲಿಯೂ ಅಂತರರಾಜ್ಯ ವಿನಿಮಯ ಕಲಾ ಪ್ರದರ್ಶನಗಳಲ್ಲದೆ ದೇಶ-ವಿದೇಶಗಳಿಂದ ರಾಜ್ಯಕ್ಕೆ ಭೇಟಿ ಕೊಡುವ ಪ್ರತಿಷ್ಠಿತರ ಗೌರವಾರ್ಥ ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಇಂತಹ ಕಾರ್ಯಕ್ರಮಗಳಲ್ಲಿ ಶ್ರೀ ಎಮ್.ಎಸ್.ನಟರಾಜನ್ ನಿರ್ವಹಿಸಿದ ಬೆಂಗಳೂರಿನ ಪ್ರಪ್ರಥಮ ಸಂಗೀತ ಆರ್ಕೆಸ್ಟ್ರಾ ಕೂಡ ಒಂದು. ಇಂತಹ ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಸಂಗೀತ ನೃತ್ಯಗಳಲ್ಲದೆ ಜಾನಪದ ಪ್ರಕಾರಗಳಿಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿತ್ತು ಇಂದಿನ ಅನೇಕ ಪ್ರಕಾರಗಳು ಆ ಮೂಲಕ ಬೆಳಕಿಗೆ ಬಂದವು ಎಂಬುದು ಗಮನಾರ್ಹ.